ಕೋಲ್ಕತ್ತಾ ಇಡಿ ರೇಡ್ ಹೈಡ್ರಾಮ ಬಳಿಕ ರಾಜ್ಯಪಾಲ ಸಿ.ವಿ.ಬೋಸ್​ಗೆ ಜೀವ ಬೆದರಿಕೆ ಇ-ಮೇಲ್; ಪೊಲೀಸರ ಹೈಅಲರ್ಟ್ | C.V. Bose

ರಾಜ್ಯಪಾಲ ಸಿ.ವಿ. ಆನಂದ್ ಬೋಸ್
ರಾಜ್ಯಪಾಲ ಸಿ.ವಿ. ಆನಂದ್ ಬೋಸ್
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಿನ್ನೆ ಇಡಿ ದಾಳಿ ಮೇಲೆ ಸಿಎಂ ಮಮತಾ ಬ್ಯಾನರ್ಜಿ ನಡೆಸಿದ ಪ್ರತಿದಾಳಿ ಬಳಿಕ ತಡರಾತ್ರಿ ರಾಜ್ಯಪಾಲ ಸಿ.ವಿ. ಆನಂದ್ ಬೋಸ್(C.V. Bose) ಅವರಿಗೆ ಸ್ಫೋಟಿಸಿ ಕೊಲೆ ಮಾಡುವ ಬೆದರಿಕೆ ಇ-ಮೇಲ್ ಬಂದಿದೆ ಎಂದು ವರದಿಯಾಗಿದೆ.
ಬೆದರಿಕೆ ಇ-ಮೇಲ್ ಬಳಿಕ ರಾಜ್ಯಪಾಲರ ಕಚೇರಿಗೆ ಬಿಗಿಭದ್ರತೆ ಒದಗಿಸಲಾಗಿದೆ. ಜೊತೆಗೆ ರಾಜ್ಯಪಾಲರ ಕಚೇರಿಯೂ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮತ್ತು ಸಿಎಂ ಮಮತಾ ಬ್ಯಾನರ್ಜಿ ಅವರ ಕಚೇರಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ರಾಜಭವನದ ಅಧಿಕಾರಿಯೊಬ್ಬರು, ಗುರುವಾರ ರಾತ್ರಿ ರಾಜ್ಯಪಾಲ ಸಿವಿ ಆನಂದ ಬೋಸ್ ಅವರಿಗೆ ಕೊಲೆ ಬೆದರಿಕೆ ಇಮೇಲ್ ಬಂದಿದೆ. ಆರೋಪಿಯು ಇಮೇಲ್‌ನಲ್ಲಿ ತನ್ನ ಮೊಬೈಲ್ ಸಂಖ್ಯೆಯನ್ನು ಸಹ ಉಲ್ಲೇಖಿಸಿದ್ದಾನೆ. ನಾವು ಡಿಜಿಪಿಗೆ ಮಾಹಿತಿ ನೀಡಿದ್ದೇವೆ. ಆ ವ್ಯಕ್ತಿಯನ್ನು ತಕ್ಷಣ ಬಂಧಿಸುವಂತೆ ಕೇಳಿಕೊಂಡಿದ್ದೇವೆ. ಕೇಂದ್ರ ಗೃಹಕಚೇರಿ, ಸಿಎಂ ಕಚೇರಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಪೊಲೀಸರು ಮತ್ತು ಸಿಆರ್‌ಪಿಎಫ್ ಒಟ್ಟಾಗಿ ಕೆಲಸ ಮಾಡುತ್ತಿವೆ. ಬೆದರಿಕ ಬಳಿಕ ಝಡ್-ಪ್ಲಸ್ ಭದ್ರತೆಯನ್ನು ಹೊಂದಿರುವ ಬೋಸ್ ಅವರ ರಕ್ಷಣೆಗಾಗಿ ಸುಮಾರು 60-70 ಕೇಂದ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ 

ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಕಿಡಿ

ಬೆದರಿಕೆ ಇ-ಮೇಲ್ ಬಗ್ಗೆ ಎಕ್ಸ್​ನಲ್ಲಿ ಕಿಡಿಕಾರಿರುವ ಬಿಜೆಪಿ ಐಟಿಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ, ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ಸ್ವಾಗತ, ಅಲ್ಲಿ ರಾಜ್ಯಪಾಲರು ಸಹ ಸುರಕ್ಷಿತವಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಲ್ಲಿದ್ದಲು ಕಳ್ಳಸಾಗಾಣೆ & ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಖಾಸಗಿ ಸಂಸ್ಥೆಯನ್ನು ರಕ್ಷಿಸಲು ಇಡಿ ಅಧಿಕಾರಿಗಳಿಂದ ದಾಖಲೆಗಳನ್ನು ಕಸಿದುಕೊಳ್ಳಲು ಸಿಎಂ ಮಮತಾ ಬ್ಯಾನರ್ಜಿಯವರು ನಿರತಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net